ತ್ಯಾಕರಿ, ವಿಲಿಯಂ ಮೇಕ್‍ಪೀಸ್
1811-1863. ಪ್ರಸಿದ್ದ ಆಂಗ್ಲ ಕಾದಂಬರಿಕಾರ. ಉಪನ್ಯಾಸಕ, ಹಾಗೂ ಪ್ರಬಂಧಕಾರ. ಮೈಕಲ್ ಆ್ಯಂಜೆಲೋ ಟಿಟ್‍ಮಾರ್ಷ್ ; ಚಾಲ್ರ್ಸ್ ಜೇಮ್ಸ್‍ಯೆಲೊಪ್ಲಷ್ ; ಜಾರ್ಜ್ ಸ್ಯಾವೇಜ್ ಫಿಟ್ಸ್‍ಬೂಡಲ್ ; ಜೇಮ್ಸ್ ; ಮಿ. ಬ್ರೌನ್; ತಿಯೊಪೈಲ್ ವ್ಯಾಗ್ ಸ್ಟಾಫ್ - ಇವು ಈತನ ಗುಪ್ತನಾಮಗಳು. ಹುಟ್ಟಿದ್ದು ಕಲಕತ್ತದಲ್ಲಿ. ಯಾರ್ಕ್ ಷೈರಿನ ಕುಲೀನ ಮನೆತನಕ್ಕೆ ಸೇರಿದ ಈತನ ತಂದೆ ರಿಚ್ಮಂಡ್ ತ್ಯಾಕರಿ ಈಸ್ಟ್ ಇಂಡಿಯ ಕಂಪನಿಯ ಅನೇಕ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವ. ತಂದೆ ತೀರಿಕೊಂಡ (1816) ಬಳಿಕ ಈತನನ್ನು ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಕಳುಹಿಸಲಾಯಿತು. ಈತ 1822ರಿಂದ 1828ರ ವರೆಗೆ ಚಾರ್ಟರ್ ಹೌಸ್ ಶಾಲೆಯಲ್ಲಿ ಶಿಕ್ಷಣ ಮುಗಿಸಿ 1829ರಲ್ಲಿ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜನ್ನು ಸೇರಿದ. ಇಲ್ಲಿ ಅನೇಕ ಸಾಹಿತಿ ಸ್ನೇಹಿತರನ್ನು ಪರಿಚಯ ಮಾಡಿಕೊಂಡ. ಒಂದು ವರ್ಷದ ಅನಂತರ ಅದನ್ನು ಬಿಟ್ಟು ಜರ್ಮನಿಯ ಪ್ರವಾಸ ಕೈಗೊಂಡ. ಆಮೇಲೆ ಇಂಗ್ಲೆಂಡಿಗೆ ಮರಳಿ 1831ರಿಂದ 1833ರ ವರೆಗೆ ಮಿಡ್ಲ್ ಟೆಂಪಲ್‍ನಲ್ಲಿ ನ್ಯಾಯಶಾಸ್ತ್ರವನ್ನು ಅಭ್ಯಾಸಮಾಡಿದ. ಆದರೆ, ಅದನ್ನು ಪೂರ್ತಿಗೊಳಿಸಲಿಲ್ಲ. 

1818ರಲ್ಲಿ ಈತನ ತಾಯಿ ಮೇಜರ್ ಎಚ್. ಡಬ್ಲ್ಯೂ. ಸಿ. ಸ್ಮಿತ್ ಎಂಬಾತನನ್ನು ಮರುಮದುವೆಯಾದಳು. ಈತ 21 ವರ್ಷದವನಾದಾಗ ಈತನ ತಂದೆ ಬಿಟ್ಟು ಹೋಗಿದ್ದ ಸುಮಾರು 20,000 ಪೌಂಡಿನ ಚರಾಸ್ತಿ ಈತನ ಕೈಸೇರಿತು. ಆದರೆ ನಾಲ್ಕು ವರ್ಷದಲ್ಲೇ ಅನೇಕ ತೊಂದರೆಗಳಿಗೆ ಸಿಲುಕಿ ಆ ಹಣವನ್ನು ಕಳೆದುಕೊಂಡ. ಅನಂತರ ತನ್ನ ಕಾಲ ಮೇಲೆ ತಾನು ನಿಲ್ಲಬೇಕಾದ ಪರಿಸ್ಥಿತಿ ಬಂದಾಗ ಕಲಾಭ್ಯಾಸಕ್ಕೆಂದು ಪ್ಯಾರಿಸ್‍ನಲ್ಲಿ ನೆಲಸಿದ (1834). 1836ರಲ್ಲಿ ಫ್ಲೋರ್ ಎಟ್ ಜೆóಫಿರ್ ಎಂಬ ಎಂಟು ವಿಡಂಬನಶೀಲ ರೇಖಾಚಿತ್ರಗಳನ್ನು ಪ್ರಕಟಿಸಿದ. ಅದೇ ವರ್ಷ ಇಸಾóಬೆಲ ಎಂಬ ಐರಿಷ್ ತರುಣಿಯನ್ನು ಮದುವೆಯಾದ. ಆದರೆ ಈ ಮದುವೆ ಈತನಿಗೆ ದುಃಖವನ್ನು ತಂದಿತು. ನಾಲ್ಕು ವರ್ಷಗಳಲ್ಲಿ ಈತನ ಹೆಂಡತಿಗೆ ಹುಚ್ಚು ಹಿಡಿಯಿತು. ಹುಚ್ಚು ವಾಸಿಯಾಗಲಿಲ್ಲ. 1892ರಲ್ಲಿ ಆಕೆ ಸತ್ತಳು. ಕೆಲಕಾಲ ಕಾನ್‍ಸ್ಟಿಟ್ಯೂಷನಲ್ ಎಂಬ ಪತ್ರಿಕೆಗೆ ಪ್ಯಾರಿಸಿನ ವರದಿಗಾರನಾಗಿದ್ದು ಮುಂದೆ ಅದು ನಿಂತುಹೋದಾಗ (1837) ಇಂಗ್ಲೆಂಡಿಗೆ ಮರಳಿದ. ಅಂದಿನಿಂದ ಜೀವನಕ್ಕಾಗಿ ಕುಂಚವನ್ನು ಬಿಟ್ಟು ಲೇಖನಿಯನ್ನು ಹಿಡಿದ. ಯೆಲೊಪ್ಲಷ್ ಕರೆಸ್ಪಾಂಡೆನ್ಸ್ (1837-38), ಕ್ಯಾತರೀನ್ (1839-40), ದಿ ಪ್ಯಾರಿಷ್ ಸ್ಕೆಚ್‍ಬುಕ್ (1840), ದಿ ಗ್ರ್ರೇಟ್ ಹೋಗಾರ್ಟಿ ಡೈಮಂಡ್ (1841) ದಿ ಹಿಸ್ಟರಿ ಆಫ್ ಸಾಮ್ಯುಯೆಲ್ ಟಿಟ್‍ಮಾರ್ಷ್ (1841) ದಿ ಐರಿಷ್ ಸ್ಕೆಚ್-ಬುಕ್ (1843) ಹಾಗೂ ದಿ ಲಕ್ ಆಫ್ ಬ್ಯಾರಿ ಲಿಂಡನ್ (1844) ಮೊದಲಾದ ಕೃತಿಗಳು ಭಾಗಭಾಗವಾಗಿ ಫ್ರೇಸರ್ಸ್ ಮ್ಯಾಗಜಿóೀನ್ ಎಂಬ ಪತ್ರಿಕೆಯಲ್ಲಿ ಅಚ್ಚಾದವು. ದಿ ಲಕ್ ಆಫ್ ಬ್ಯಾರಿ ಲಿಂಡನ್ ಎಂಬುದು ಈತನ ಶ್ರೇಷ್ಠ ಕೃತಿಯೆಂದು ಅನೇಕ ವಿಮರ್ಶಕರು ಹೊಗಳಿದ್ದಾರೆ. ಹಾಸ್ಯವ್ಯಂಗ್ಯಭರಿತವಾದ ಈ ಕೃತಿಯಲ್ಲಿ ಈತ 18ನೆಯ ಶತಮಾನದ ಉಚ್ಚ ಮತ್ತು ನೀಚ ಜೀವನವನ್ನು ಉಜ್ಜ್ವಲವಾಗಿ ಚಿತ್ರಿಸಿದ್ದಾನೆ. ಯೆಲೊಪ್ಲಷ್ ಮತ್ತು ಮೈಕಲ್ ಆ್ಯಂಜೆಲೋ ಟಿಟ್‍ಮಾರ್ಷ ಎಂಬ ಗುಪ್ತನಾಮಗಳಲ್ಲಿ ಬರೆದ ಲೇಖನಗಳು ಕಾಮಿಕ್ ಟೇಲ್ಸ್ ಅಂಡ್ ಸ್ಕೆಚಸ್ ಎಂಬ ಕೃತಿಯಲ್ಲಿ ಸಂಗ್ರಹಿಸಿ 1841 ರಲ್ಲಿ ಪ್ರಕಟಿಸಿದ. 1841ರಿಂದ 1846ರ ವರೆಗಿನ ಅವಧಿಯಲ್ಲಿ ಈತ ಅತ್ಯಂತ ಕುಶಲ ಸ್ವತಂತ್ರ ಪತ್ರಿಕೋದ್ಯೋಗಿಯೆಂದು ಹೆಸರುಗಳಿಸಿದ. 1842 ಮತ್ತು 1851ರ ಮಧ್ಯದಲ್ಲಿ ಜೀಮೆಸಸ್ ಡೈರಿ (1845) ; ಮಿಸೆಸ್ ಪರ್ಕಿನ್ಸ್ ಬಾಲ್ (1846) ; ದಿ ಬುಕ್ ಆಫ್ ಸ್ನಾಬ್ಸ್ (1846-47) ; ಮಿ. ಪಂಚಸ್ ಪ್ರೈಜ್ó ನಾವೆಲಿಸ್ಟ್ (1847) ಮೊದಲಾದ ಕೃತಿಗಳು ಹಾಸ್ಯವಿಡಂಬನಗಳಿಗೆ ಹೆಸರಾದ ಪಂಚ್ ನಿಯತಕಾಲಿಕದಲ್ಲಿ ಭಾಗಭಾಗವಾಗಿ ಪ್ರಕಟವಾದವು. ಇವುಗಳಲ್ಲಿ ಮೂರನೆಯ ಕೃತಿ ಈತನಿಗೆ ಖ್ಯಾತಿಯನ್ನು ತಂದಿತು. ನಾಲ್ಕನೆಯದರಲ್ಲಿ ಎಡ್ವರ್ಡ್ ಬುಲ್ವರ್ - ಲಿಟನ್, ಚಾರಲ್ಸ್ ಜೇಮ್ಸ್ ಲೀವರ್, ಡಿಸ್ರೇಲಿ ಮೊದಲಾದವರ ಪ್ರತಿಭೆಯ ವಿಡಂಬನ ಅನುಕರಣಗಳಿವೆ. ಈತನಿಗೆ ನಿಜಕ್ಕೂ ಖ್ಯಾತಿತಂದ ಕೃತಿಯೆಂದರೆ ಪ್ರಪಂಚದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದೆಂದು ಹೆಸರಾದ ವ್ಯಾನಿಟಿಫೇರ್. ಇದು 1947ರ ಜನವರಿಯಿಂದ ಪ್ರಾರಂಭವಾಗಿ 19 ಮಾಸಿಕ ಭಾಗಗಳಲ್ಲಿ ಪ್ರಕಟವಾಯಿತು. ಇದರಿಂದಾಗಿ ಈತ ಡಿಕನ್ಸ್‍ಗೆ ಸರಿದೂಗುವ ಪ್ರಥಮ ದರ್ಜೆಯ ಕಾದಂಬರಿಕಾರರಲ್ಲೊಬ್ಬನೆಂದು ಹೆಸರುವಾಸಿಯಾದ. ಕಥಾನಾಯಕಿ ಬೆಕಿ ಶಾರ್ಪ್‍ಳನ್ನು ಪರಿಚಯ ಮಾಡಿಕೊಡುವ ಪ್ರಾರಂಭದ ಅಧ್ಯಾಯಗಳು ಬಹಳ ಸ್ವಾರಸ್ಯವಾಗಿವೆ. ಅಷ್ಟು ಕಲಾವಂತಿಕೆ ಇಲ್ಲದಿದ್ದರೂ ಉಳಿದೆಲ್ಲ ದೃಷ್ಟಿಗಳಿಂದಲೂ ಇದು ಈತನ ಶ್ರೇಷ್ಠ ಕೃತಿಯೆನ್ನಬಹುದು. ಈ ಕೃತಿಯ ಅನಂತರ ದಿ ಹಿಸ್ಟರಿ ಆಫ್ ಪೆಂಡನಿಸ್ (1848-50), ದಿ ಹಿಸ್ಟರಿ ಆಫ್ ಹೆನ್ರಿ ಎಸ್ಮಾಂಡ್ (1852) ಮತ್ತು ದಿ ನ್ಯೂಕಮ್ಸ್ (1853-55) ಹೊರಬಂದವು. ಪೆಂಡನಿಸ್ ಆತ್ಮಕಥಾನಕರೂಪದ್ದು. ಇದರಲ್ಲಿ ಈತ ತನ್ನ ಕಾಲದ ಸಾಹಿತ್ಯ ಜೀವನವನ್ನು ನೈಜವಾಗಿ ಚಿತ್ರಿಸಿದ್ದಾನೆ. ಇದು ಭಾಗಭಾಗವಾಗಿ ಪ್ರಕಟವಾಗಿದ್ದರಿಂದ ಕಲಾ ಪೂರ್ಣಕೃತಿಯಾಗಿದೆ. 18ನೆಯ ಶತಮಾನದ ಹಾಗೂ ಅದರಲ್ಲಿಯೂ ರಾಣಿ ಆ್ಯನಳ ಕಾಲದ ಬಗೆಗೆ ಈತನಿಗಿದ್ದ ವಸ್ತುಸ್ಥಿತಿ ಪರಿe್ಞÁನದ ಅರಿವಿನಿಂದಾಗಿ ಇದು ಪ್ರಥಮ ದರ್ಜೆಯ ಐತಿಹಾಸಿಕ ಕಾದಂಬರಿ ಎನಿಸಿದೆ. ದಿ ನ್ಯೂಕಮ್ಸ್ ಎಂಬುದು ಮಾಸಿಕ ಭಾಗಗಳಲ್ಲಿ ಪ್ರಕಟವಾದ ಸಂಸಾರಜೀವನದ ಕುಶಲಚಿತ್ರಣ. ಈ ಮೊದಲು ಈತ ಇಂಗ್ಲೆಂಡ್, ಅಮೇರಿಕಗಳಲ್ಲಿ ಉಪನ್ಯಾಸಕನಾಗಿದ್ದು 1851ರಲ್ಲಿ ದಿ ಇಂಗ್ಲಿಷ್ ಹ್ಯೂಮರಿಸ್ಟ್ಸ್ ಆಫ್ ದಿ ಎಯ್‍ಟೀಂತ್ ಸೆಂಚುರಿ ಎಂಬ ಕೃತಿಯನ್ನು ಹೊರತಂದ. ಅನಂತರ ದಿ ರೋಸ್ ಅಂಡ್ ದಿ ರಿಂಗ್ ಎಂಬ ವಿಡಂಬನಾತ್ಮಕ ಕೃತಿಯನ್ನು 1854ರಲ್ಲೂ 1855ರಲ್ಲಿ ಅಮೇರಿಕದಲಿ ಮರುಪ್ರವಾಸ ನಡೆಸಿ ದಿ ಫೋರ್ ಜಾರ್ಜಸ್ ಎಂಬ ಉಪನ್ಯಾಸರೂಪದ ಕೃತಿಯನ್ನು 1860ರಲ್ಲೂ ಪ್ರಕಟಿಸಿದ. 1857ರಲ್ಲಿ ಪಾರ್ಲಿಮೆಂಟಿನ ಸದಸ್ಯತ್ವಕ್ಕೆ ಆಕ್ಸ್‍ಫರ್ಡಿನಿಂದ ನಿಂತು ಸೋತ. ಎಸ್ಮಾಂಡ್ ಕಾದಂಬರಿಯ (1857-59) ಮುಂದಿನ ಭಾಗ ಎನಿಸಿದ ದಿ ವರ್ಜೀನಿಯನ್ಸ್ ಎಂಬ ಕೃತಿಯನ್ನು ಮಾಸಿಕ ಭಾಗಗಳಲ್ಲಿ ಪ್ರಕಟಿಸಿದ. 1860ರಲ್ಲಿ ಕಾರ್ನ್‍ಹಿಲ್ ಮ್ಯಾಗಜೀನ್ ಎಂಬ ಪತ್ರಿಕೆಯ ಸಂಪಾದಕನಾದ. ಲವೆಲ್ ದಿ ವಿಡೋಯರ್ (1860), ದಿ ಅಡ್ವೇಂಚರ್ಸ್ ಆಫ್ ಫಿಲೀಸ್ (1861-62) ಎಂಬ ಕೃತಿಗಳು ಹಾಗೂ ದಿ ರೌಂಡಬೌಟ್ ಫೇಪರ್ಸ್ ಎಂಬ ಉತ್ತಮ ಪ್ರಬಂಧಗಳು ಈ ಪತ್ರಿಕೆಯಲ್ಲಿ ಪ್ರಕಟವಾದವು. ದಿ ಅಡ್ವೆಂಚರ್ಸ್ ಆಫ್ ಫಿಲಿಸ್ ಎಂಬುದು ಎ ಷ್ಯಾಬಿ ಜೆಂಟೀಲ್ ಸ್ಟೋರಿ ಎಂಬುದರ ಮುಂದಿನ ಭಾಗ.

ತ್ಯಾಕರಿ ಅನೇಕ ಕವಿತೆಗಳನ್ನೂ ಬರೆದ. ದಿ ಕ್ರಾನಿಕಲ್ಸ್ ಆಫ್ ದಿ ಡ್ರಮ್ (1841) ಎಂಬ ಕೃತಿ ಈತನ ಶ್ರೇಷ್ಠ ಮಟ್ಟದ ಕವಿತಾಶಕ್ತಿಗೆ ಉದಾಹರಣೆಯಾಗಿದೆ.

ಈತ ಯಾವಾಗಲೂ ಶಾಂತಚಿತ್ತದಿಂದ ಮಾನಜೀವನವನ್ನು ಅವಲೋಕಿಸುತ್ತಿದ್ದ. ಚಾರಲ್ಸ್ ಡಿಕನ್ಸ್ ಮೊದಲಾದವರಂತೆ ಸಮಾಜದಲ್ಲಿನ ಲೋಪದೋಷಗಳನ್ನು ತೀವ್ರವಾಗಿ ಖಂಡಿಸಿ ಸಿಟ್ಟಿಗೇಳಿಸುವ ಕೃತಿಗಳನ್ನು ಈತ ರಚಿಸಲಿಲ್ಲ. ಈತ ಸೃಜಿಸಿದ ಪಾತ್ರಗಳು ಒಂದು ಕಾಲಕ್ಕೆ ಒಂದು ದೇಶಕ್ಕೆ ಒಂದು ಸಮಾಜಕ್ಕೆ ಮಾತ್ರ ಅನ್ವಯಿಸುವಂಥವಾಗಿರದೆ ವಿಶ್ವವ್ಯಾಪಕವಾಗಿದ್ದು ಎಲ್ಲ ಕಾಲಕ್ಕೂ ಅನ್ವಯಿಸುವಂತಾಗಿವೆ. ಈತನಲ್ಲಿ ಸೂಕ್ಷ್ಮವಾದ ಹಾಗೂ ಸಹಾನುಭೂತಿಯ ಅಂತದೃಷ್ಟಿಯಿಂದ ಕೂಡಿದ ಪಾತ್ರಗಳನ್ನು ಚಿತ್ರಿಸುವ ಅಮೋಘ ಶಕ್ತಿಯಿತ್ತು. ಈತನ ಶೈಲಿಯೂ ಅಷ್ಟೆ, ಬಹು ಸರಳವಾದದು.					(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ